ಸ್ಮೃತಿಪಟಲದ ಸಮರ ಮಸ್ತಿಷ್ಕದೊಂದಿಗೆ

ನನ್ನ ವೃತ್ತಿಯೇ ಹೀಗೊಂದು ರೂಢಿಯನ್ನು ಪರಿಚಯಿಸಿಬಿಟ್ಟಿದೆ, ವಿದ್ಯಾರ್ಥಿಗಳು ವರ್ಗದಲ್ಲಿಲ್ಲವೆಂದರೆ ಇಣುಕಿ ನೋಡಿ ಖಾತ್ರಿ ಪಡಿಸಿಕೊಳ್ಳುವುದನ್ನ. ಸುಮಾರು ನಾಲ್ಕು ತಿಂಗಳುಗಳು ಉರುಳಿ ಹೋದವು ಪ್ರಾಂಗಣದಲ್ಲಿ ಮಕ್ಕಳ ಶಬ್ದವಿಲ್ಲದೆಯೇ ಬಹುಶಃ ಇಂದು , ನಾಳೆ ಅಥವಾ ಕೆಲವು ದಿನಗಳ ನಂತರವಾದರೂ ಬಂದೇ ಬರುವರೆಂಬ ನಂಬಿಕೆಯಲ್ಲಿ ದಿನಗಳು ಕಳೆಯುತ್ತಿವೆ.
  ನಂಬಿಕೆಯ ಪ್ರಕಾರ ಕಳೆದೊಂದು ಶತಮಾನದಲ್ಲಿ ಇಷ್ಟೊಂದು ದೀರ್ಘಾವಧಿಯ ದಿನಗಳನ್ನು ವಿದ್ಯಾರ್ಥಿಗಳು ಇಲ್ಲದೆಯೇ ಒಬ್ಬ ಶಿಕ್ಷಕ ಕಳೆದಿರುವುದು ಇದೇ ಮೊದಲಾಗಿರಬಹುದು. ಅವರಿರುವಾಗ ಹೇಗೋ ಮುಗ್ಧ ಮನಸ್ಸುಗಳನೊಡಗೂಡಿ ದಿನ ಗತಿಸಿದ್ದೇ ತಿಳಿದುಬರುತ್ತಿರಲಿಲ್ಲ . ಮೊದಲನೇ ಅವಧಿಯಿಂದಲೇ ಯಾವ್ಯಾವ ಸ್ತರದ ವಿದ್ಯಾರ್ಥಿಗಳನ್ನು ಹೇಗೇಗೆ  ಜೀವನದ ದಾರಿಯನ್ನು ಸುಗಮಗೊಳಿಸಿಕೊಳ್ಳಲು ಅನುವು ಮಾಡಬೇಕೆಂಬ ತರಹೇವಾರಿ ಆಲೋಚನೆಗಳು ಮಸ್ತಿಷ್ಕದ ಅಂಗಳದಲ್ಲಿ ನೃತ್ಯ ಮಾಡುತ್ತಿರುತ್ತಿದ್ದವು ಆದರೀಗ ಅವುಗಳ ಸುಳಿವೇ ಇಲ್ಲದಂತಾಗಿಬಿಟ್ಟಿದೆ. ಎಂದೋ ಒಂದು ದಿನ ತರಗತಿಗೆ ತಡವಾಗಿ ಬಂದ ವಿದ್ಯಾರ್ಥಿಯನ್ನು ಪರವಾನಿಗೆ ನೀಡದೆ ಕೊಠಡಿಯ ಮೂಲೆಯಲ್ಲಿ ನಿಲ್ಲಿಸಿದ ನೆನಪು ಸ್ಮೃತಿಪಠಲದ ಮೇಲೆ ಮಿಂಚಿನಂತೆ ಹಾಯ್ದು ಹೋದಂತನಿಸುತ್ತಿದೆ . ಇದೇ ಬಹುಶಃ ಈವತ್ತಿನ ನನ್ನೀ ಆಲೋಚನೆ ಮತ್ತು ನಾಜೂಕು ಪರಿಸ್ಥಿತಿಗೆ ಕಾರಣವಿರಬಹುದಾ ಎಂದೆನಿಸುತ್ತಿದೆ? ಅಥವಾ ಅವರಿಗರಿವಿಲ್ಲದಂತೆಯೇ ಹಠಾತ್ತನೆ ವಿಷಯದ ಪರೀಕ್ಷೆಯನ್ನು ನಡೆಸಿದುದಕ್ಕಿರಬಹುದೇ ಎಂಬುದೇ ಗೊಂದಲವಾಗಿದೆ. 
  ವೃತ್ತಿಜೀವನದ ಮಧ್ಯವಯಸ್ಸಿನಲ್ಲಿ ಇಂತಹ ವಿಚಾರಗಳು ಸಹಜವೇನೋ ಅನ್ನಿಸುತ್ತಿದೆ. ಮುಗ್ಧಜೀವಗಳ ಜೀವನವನ್ನು ರೂಪಿಸುವ ವೃತ್ತಿ ಇಂದೇಕೋ ಒಂಟಿಯಾಗಿರುವಂತೆ ಭಾಸವಾಗುತ್ತಿದೆ.ಅದೆಷ್ಟು ದಿನಗಳನ್ನು ಹೀಗೆಯೇ ಕಳಿಯಬೇಕೋ ಎಂಬೆನ್ನುವ ಮುನ್ಸೂಚನೆಯೂ ಇಲ್ಲದಂತಾಗಿದೆ ಮನಕ್ಕೆ ? 
 ಹೇಗೋ ಒಂದು ಸರತಿ ಮುಗ್ಧ ಮನಸ್ಸುಗಳೆಲ್ಲವೂ ಒಂದುಗೂಡಿ  ಪ್ರಾಂಗಣಕ್ಕೆ ಬಂದರೆ ಸಾಕೆನಿಸಿಬಿಟ್ಟಿದೆ. ಆದರೆ ಎಲ್ಲವೂ ನನ್ನಿಷ್ಟದಂತೆಯೇ ನಡೆಯಬೇಕಿಂದಿದ್ದಲ್ಲಿ ಕಾಣದ ಶಕ್ತಿಯ ಪರಿಚಯವೇ ನನಗಿರುತ್ತಿರಲಿಲ್ಲವೇನೋ ಅದಕ್ಕೆ ತಾನೇ ಆ ಅದೃಶ್ಯ ಶಕ್ತಿಯಿಂದು ನನ್ನ ಒಡಲೊಳಲಾಳದ ವ್ಯಥೆಯನ್ನು ಕಥೆಯ ರೂಪದಲ್ಲಿ ವ್ಯಕ್ತಪಡಿಸಲು ಪ್ರೇರೇಪಿಸಿದ್ದು.
   ಕಾಯುವೆನು ನಾನು ನಿಮ್ಮಯ ಬರುವಿಕೆಗಾಗಿ ಓ ನನ್ನ ಮಂದಸ್ಮಿತ ಮುಗ್ಧರೇ........

  ಡಾ||. ಸಿ ಬಿ. ಪಾಟೀಲ

Comments